ಪೆರಾನ್, ಹ್ವಾನ್ ಡೊಮೀಂಗೋ
1895-1974. ಆರ್ಜೆಂಟೀನದ ರಾಜಕಾರಣಿ, ಅಧ್ಯಕ್ಷ. 1895ರ ಅಕ್ಟೋಬರ್ 8 ರಂದು ಬ್ವೇನಸ್ ಐರಿಸ್ ಪ್ರಾಂತ್ಯದಲ್ಲಿ ಜನಿಸಿದ. ಅನೇಕ ಶತಮಾನಗಳಿಂದ ಆರ್ಜೆಂಟೀನಾದಲ್ಲಿ ನೆಲೆಸಿದ್ದ ಮನೆತನವೊಂದರಲ್ಲಿ (ಕ್ರಿಯೋಲ್) ಜನಿಸಿದ. ಇವನು ಹದಿನಾರನೆಯ ವಯಸ್ಸಿನಲ್ಲಿ ಸೈನಿಕ ಶಾಲೆ ಸೇರಿದ. ಸುಮಾರು 183 ಸೆಂ.ಮೀ. ಎತ್ತರವಾಗಿ ಗಟ್ಟಿಮುಟ್ಟಾಗಿದ್ದು ಪೆರಾನ್ ಸೈನ್ಯದಲ್ಲಿ ಎಲ್ಲರ ಗಮನ ಸೆಳೆದ. ಇವನು ದಕ್ಷ ಕತ್ತಿ ವರಸೆಗಾರ. ಸ್ಕೀಯಿಂಗ್ (ಮಂಜುಗಡ್ಡೆಯ ಮೇಲೆ ಹಾರಾಟ) ಪ್ರವೀಣ. ಮುಷ್ಟಿಯುದ್ಧ ನಿಪುಣ. 1930ರ ದಶಕದ ಉತ್ತರ ಭಾಗದಲ್ಲಿ ಇವನು ಇಟಲಿಯಲ್ಲಿ ಸೈನಿಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ. ಫ್ಯಾಸಿಸ್ಟರೂ ನಾಟ್ಸಿಗಳೂ ಗಳಿಸಿದ ವಿಜಯಗಳನ್ನು ಕಣ್ಣಾರೆ ಕಂಡ. ಅವರ ವಿಧಾನಗಳು ಇವನ ಮೇಲೆ ಪರಿಣಾಮ ಉಂಟುಮಾಡಿದುವು. ಪೆರಾನನಿಗೆ ಇತಿಹಾಸ ಮತ್ತು ರಾಜಕೀಯ ತತ್ತ್ವಗಳಲ್ಲಿ ಒಲವಿತ್ತು. ಆ ಕ್ಷೇತ್ರದಲ್ಲಿ ಇವನು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. ಆರ್ಜೆಂಟೀನದ ದುರ್ಬಲ ಸರ್ಕಾರವನ್ನು 1943ರಲ್ಲಿ ಉರುಳಿಸಿದ. ಸೈನಿಕ ಸಂಚುಗಾರರ ತಂಡದಲ್ಲಿ ಪೆರಾನನೂ ಸೇರಿದ್ದ. ಮುಂದಿನ ಮೂರು ವರ್ಷಗಳಲ್ಲಿ ಅಲ್ಲಿ ಅಧಿಕಾರಕ್ಕೆ ಬಂದ. ಸೇನಾ ಆಡಳಿತದಲ್ಲಿ ಪೆರಾನನ ಪ್ರಭಾವ ಕ್ರಮಕ್ರಮವಾಗಿ ವರ್ಧಿಸಿತು. ಮೊದಮೊದಲು ಉದ್ದೇಶಪೂರ್ವಕವಾಗಿಯೇ ಕಾರ್ಯದರ್ಶಿಯ ಸಣ್ಣ ಹುದ್ದೆಯನ್ನು ಆಯ್ದುಕೊಂಡಿದ್ದ. ಪೆರಾನ್ 1945ರ ವೇಳೆಗೆ ಉಪಾಧ್ಯಕ್ಷ ಹಾಗೂ ಯುದ್ಧ ಮಂತ್ರಿಯಾದಾಗ ಅವನಲ್ಲಿದ್ದ ಅಧಿಕಾರದ ಆಕಾಂಕ್ಷೆ ವ್ಯಕ್ತವಾಯಿತು. ಕಾರ್ಮಿಕರ ಬೆಂಬಲದಿಂದ ಅವನು ಪ್ರಾಬಲ್ಯ ಗಳಿಸುತ್ತಿದ್ದ. ಸೈನ್ಯದಲ್ಲೂ ಅವನು ಪ್ರಭಾವ ಪಡೆದಿದ್ದ.
(ಆರ್.ಆರ್.ಎ.)

	ಸಂವಿಧಾನಪ್ರಿಯ ನಾಗರಿಕ ಮತ್ತು ಅಧಿಕಾರಿಗಳ ಕ್ಷಿಪ್ರಾಕ್ರಮಣ ಕಾರ್ಯಾಚರಣೆಯಿಂದ ಪೆರಾನ್ 1945ರ ಅಕ್ಟೋಬರಿನಲ್ಲಿ ಅಧಿಕಾರಚ್ಯುತನಾದ. ಆದರೆ, ಆತನ ಪ್ರಣಯಿನಿಯಾಗಿದ್ದ ಸುಂದರಿ ಇವಾ ಡೆವೆರ್ಟಿಯೊ ಕಾರ್ಮಿಕ ಸಂಘದಲ್ಲಿದ್ದ ಆಕೆಯ ಸಹಚರರೂ ಬ್ವೇನಸ್ ಐರಿಸ್‍ನ ಕಾರ್ಮಿಕರನ್ನು ಸಂಘಟಿಸಿದರು. ಪೆರಾನ್ ಬಂಧನದಿಂದ ಬಿಡುಗಡೆ ಹೊಂದಿದ. ಅಂದು ರಾತ್ರಿ ಅಧ್ಯಕ್ಷನ ಅರಮನೆಯ ಪಡಸಾಲೆಯಿಂದ ಅವನು 3 ಲಕ್ಷ ಜನರನ್ನುದ್ದೇಶಿಸಿ ಭಾಷಣ ಮಾಡಿದ. ಅದನ್ನು ಬಾನುಲಿ ಪ್ರಸಾರ ಮಾಡಿತು. ಬರಲಿದ್ದ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಾಗಿಯೂ ಜನರ ಸಹಕಾರದಿಂದ ಬಲಿಷ್ಠ ಹಾಗೂ ನ್ಯಾಯಬದ್ದ ರಾಷ್ಟ್ರರಚನೆಗಾಗಿ ಶ್ರಮಿಸುವುದಾಗಿಯೂ ವಚನ ನೀಡಿದ. ಅನಂತರ ಕೆಲವು ದಿನಗಳಲ್ಲೇ ಅವನು ಇವಾಳನ್ನು ಮದುವೆಯಾದ. ಮುಂದೆ ಆರ್ಜೆಂಟೀನಾವನ್ನಾಳಲು ಅವಳಿಂದ ನೆರವು ದೊರಕಿತು. 1946 ಫೆಬ್ರುವರಿಯಲ್ಲಿ ಪೆರಾನ್ ಅಧ್ಯಕ್ಷನಾಗಿ ಅಯ್ಕೆ ಹೊಂದಿದ.

	ಪೆರಾನ್ ಆರ್ಜೆಂಟೀನದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಯತ್ನಿಸಿದ ಆರ್ಥಿಕ ವ್ಯವಹಾರಗಳಲ್ಲಿ ಸರ್ಕಾರದ ಪಾತ್ರ ಬೆಳೆಯಿತು. ಕಾರ್ಮಿಕರಿಗೆ ಹೆಚ್ಚಿನ ಆರ್ಥಿಕ ಸಾಮಾಜಿಕ ಸೌಲಭ್ಯಗಳು ದೊರಕುವಂತೆ ಮಾಡುವುದು ಅವನ ಉದ್ದೇಶವಾಗಿತ್ತು. ಅವನು ಬ್ರಿಟನ್ ಅಮೆರಿಕಗಳೆರಡಕ್ಕೂ ವಿರುದ್ಧವಾಗಿದ್ದ, ಬಂಡವಾಳವಾದ ಕಮ್ಯೂನಿಸಮ್ ಎರಡಕ್ಕೂ ನಡುವಣ, ಮೂರನೆಯ ವ್ಯವಸ್ಥೆಯೊಂದನ್ನು ನಿರ್ಮಿಸುವುದು ಅವನ ಉದ್ದೇಶವಾಗಿತ್ತು. ದಕ್ಷಿಣ ಅಮೆರಿಕದ ದೇಶಗಳಲ್ಲೆಲ್ಲ ಅವನು ಅರ್ಜೆಂಟೀನದ ಪ್ರಭಾವವನ್ನು ಬೆಳೆಸಲು ಯತ್ನಿಸಿದ. ಹಲವು ದೇಶಗಳ ರಾಜಕೀಯ ವ್ಯವಹಾರಗಳೆಲ್ಲ ಆರ್ಜೆಂಟೀನ ಪ್ರವೇಶಿಸಿತು. ಪೆರಾನ್ ನೇತೃತ್ವದಲ್ಲಿ ಆರ್ಜೆಂಟೀನದಲ್ಲಿದ್ದ ಮಾದರಿಯ ಕಾರ್ಮಿಕ ಮಹಾಸಂಘವನ್ನು ಇಡೀ ದಕ್ಷಿಣ ಅಮೆರಿಕಕ್ಕೆ ಅನ್ವಯಿಸುವಂತೆ ಸಂಘಟಿಸಿದ.

	ಆರ್ಜೆಂಟೀನದ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನೇನೂ ಅವನು ಮಾಡಲಾಗಲಿಲ್ಲವಾದರೂ ಅದನ್ನು ಬಹಳ ಮಟ್ಟಿಗೆ ಪರಿವರ್ತಿಸಿದ. ಕಾರ್ಮಿಕರಿಗೆ ಹೆಚ್ಚಿನ ವೇತನಗಳೂ ಇತರ ಸೌಲಭ್ಯಗಳೂ ಲಭ್ಯವಾದವು. ರೈಲ್ವೆ ಮುಂತಾದ ಲೋಕೋಪಯೋಗಿ ಸಂಸ್ಥೆಗಳು ರಾಷ್ಟ್ರೀಕರಣಗೊಂಡವು. ಮರಾಮತ್ ಕಾಮಗಾರಿಗಳಿಗೆ ಅವನು ವಿಪುಲವಾಗಿ ಹಣ ಒದಗಿಸಿದ. ಯುದ್ಧಕಾಲದಲ್ಲಿ ಶೇಖರವಾಗಿದ್ದ ಅನಂತರವೂ ವಿದೇಶಿ ವ್ಯಾಪಾರದಿಂದ ಬಂದಿದ್ದ ವಿದೇಶಿ ವಿನಿಮಯದಿಂದ ಇದಕ್ಕೆಲ್ಲ ಖರ್ಚು ಮಾಡಲಾಯಿತು. ಅವನು ದೇಶದ ಸೇನಾಬಲದ ಹತೋಟಿ ಹೊಂದಿದ್ದರಿಂದ ಅಲ್ಲಿಯ ರಾಜಕಾರಣದ ಮೇಲೆ ಹಿಡಿತ ಹೊಂದಲು ಸಾಧ್ಯವಾಯಿತು. ಪೌರ ಹಕ್ಕುಗಳನ್ನು ಅವನು ಮೊಟಕು ಮಾಡಿದ.

	1951ರಲ್ಲಿ ಪೆರಾನ್ ಮತ್ತೆ ಆಯ್ಕೆಯಾದ. ಅತಿಯಾದ ಹಾಗೂ ಅವ್ಯವಸ್ಥಿತ ಕೈಗಾರಿಕಾಕರಣದ ನೀತಿಯನ್ನು ಅವನು ಮಾರ್ಪಾಡುಗೊಳಿಸಿದನಲ್ಲದೆ ಅದುವರೆಗೂ ಅವಜ್ಞೆಗೆ ಒಳಗಾಗಿದ್ದ ಕೃಷಿಗೆ ಹೆಚ್ಚಿನ ಗಮನ ನೀಡಿದ. ಅಮೆರಿಕನ್ ವಿರೋಧಿ ಧೋರಣೆಯ ತೀವ್ರತೆಯೂ ಕಡಿಮೆಯಾಯಿತು. ಆದರೆ, ಪ್ರಜಾಪ್ರಭುತ್ವದಿಂದ ಸ್ಫೂರ್ತಿಗೊಂಡ ಅಧಿಕಾರಿಗಳಿಂದ ನಿರ್ದೇಶಿತವಾದ ಭೂ-ನೌಕಾ ಸೇನಾ ಬಂಡಾಯ 1955ರ ಸೆಪ್ಟಂಬರ್ 19 ರಂದು ನಡೆದು ಪೆರಾನ್ ಅಧಿಕಾರ ಕಳೆದುಕೊಂಡು ಪೆರಗ್ವೇಗೆ ಓಡಿಹೋದ. ಕೊನೆಗೆ ಅವನು ಮೆಡ್ರಿಡಿನಲ್ಲಿ ನೆಲಸಿದ.

	ಆದರೆ ಆರ್ಜೆಂಟೀನದ ಪೆರಾನ್ ಅನುಯಾಯಿಗಳು ಪ್ರಭಾವಶಾಲಿಗಳಾಗಿಯೇ ಇದ್ದರು. ಚುನಾವಣೆಗಳಲ್ಲಿ ಅವರ ಬಲದ ಪ್ರದರ್ಶನವಾಗುತ್ತಿತ್ತು. ಪೆರಾನನ ಅನಂತರ ಬಂದ ಆಡಳಿತಗಾರರ ಅದಕ್ಷತೆ ವ್ಯಕ್ತವಾಗಿತ್ತು. ಆ ಸಂಪದ್ಭರಿತ ದೇಶದ ಆರ್ಥಿಕ ರಾಜಕೀಯ ಸಾಮಾಜಿಕ ಜಡತ್ವದ ಸಮಸ್ಯೆಯನ್ನು ಪರಿಹರಿಸಲು ಅವರು ಅಸಮರ್ಥರಾಗಿದ್ದರು. ಜನಕ್ಕೆ ಪೆರಾನನ ಆಡಳಿತದ ನೆರವು ಹೆಚ್ಚು ಹೆಚ್ಚು ಸಹ್ಯವೆನಿಸುತ್ತಿತ್ತು. ಅಪ್ಯಾಯವೆನಿಸುತ್ತಿತ್ತು. 1971ರಲ್ಲಿ ಅಧಿಕಾರಕ್ಕೆ ಬಂದ ಜನರಲ್ ಅಲೆಜಾಂಡ್ರೊ ಲಾನೊಸೆ ಆರ್ಜೆಂಟೀನದಲ್ಲಿ 1973ರ ಅಂತ್ಯದೊಳಗೆ ಸಂವೈಧಾನಿಕ ಪ್ರಜಾಸತ್ತೆಯನ್ನು ಪುನಃ ಸ್ಥಾಪಿಸುವುದಾಗಿ ಘೋಷಿಸಿ, ಪೆರಾನಿಸ್ಟ್ ಪಕ್ಷವೂ ಸೇರಿ ಎಲ್ಲ ರಾಜಕೀಯ ಪಕ್ಷಗಳು ಮತ್ತೆ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿದ. ಅವನ ಆಹ್ವಾನದ ಮೇರೆಗೆ 1972ರಲ್ಲಿ ಪೆರಾನ್ ಆರ್ಜೆಂಟೀನಕ್ಕೆ ಹಿಂದಿರುಗಿದ. ಪೆರಾನಿನ ಎರಡನೆಯಯ ಹೆಂಡತಿ ಇವಾ ಪೆರಾನ್ 1952ರಲ್ಲಿ ತೀರಿಕೊಂಡಿದ್ದಳು. ಮೂರನೆಯ ಪತ್ನಿ ಮರೀಯ ಎಸ್ಟೆಲಳನ್ನು (ಇಸಬೆಲಿಟ) ಇವನು 1961ರಲ್ಲಿ ಮದುವೆಯಾಗಿದ್ದ. 1973ರಲ್ಲಿ ನಡೆದ ಚುನಾವಣೆಗಳಲ್ಲಿ ಪೆರಾನಿಸ್ಟ್ ಅಭ್ಯರ್ಥಿಗಳು ಜಯಗಳಿಸಿ ಅಧಿಕಾರ ದೊರಕಿಸಿಕೊಂಡರು. ಪೆರಾನ್ ಸ್ಪರ್ಧಿಸಲು ಒಪ್ಪಲಿಲ್ಲ. ಹೆಕ್ಟರ್ ಜೆ. ಕ್ಯಾಂಪೊರ ಅಧ್ಯಕ್ಸರಾಗಿ ಅಯ್ಕೆಹೊಂದಿದ.

	ಮರೀಯ ಎಸ್ಟೆಲ(ಇಸಬೆಲಿಟ) ಪೆರಾನ್ ಉಪಾಧ್ಯಕ್ಷೆಯಾದಳು. ಸ್ವಲ್ಪ ಕಾಲಾನಂತರ ಪೆರಾನನೇ ಅಧ್ಯಕ್ಷನಾಗಿದ್ದ. 1974ರಲ್ಲಿ ಇವನು ತೀರಿಕೊಂಡ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ